ಡೆಕ್ಸ್‍ಟ್ರಿನ್ -
	ಹಿಟ್ಟಿನಿಂದ ಉತ್ಪಾದಿಸಲ್ಪಟ್ಟ ವಸ್ತುಗಳ ಪೈಕಿ ಒಂದರ ಹೆಸರು. ಅಣುರಚನೆಯ ಜಟಿಲತೆಯಲ್ಲಿ ಇದು ಹಿಟ್ಟು ಮತ್ತು ಸಕ್ಕರೆಗಳಿಗೆ ಮಧ್ಯವರ್ತಿಯಾಗಿದೆ. ಡಯಾಸ್ಟೇಸ್ ಕಿಣ್ವದ ಮೂಲಕ ಹಿಟ್ಟು ಮಾಲ್ಟೋಸ್ ಸಕ್ಕರೆಯಾಗಿ ಪರಿವರ್ತನೆಯಾದರೆ ಅದೇ ಹಿಟ್ಟು ದೀರ್ಘಕಾಲದ ಆಮ್ಲಿಕ ಜಲ ವಿಶ್ಲೇಷಣೆಯಿಂದ ಗ್ಲೂಕೋಸ್ ಸಕ್ಕರೆಯಾಗಿ ಮಾರ್ಪಡುತ್ತದೆ. ಆದರೆ ಬೇಯಿಸುವುದಕ್ಕೆ ಉಗಿಯನ್ನು ಅಥವಾ ತಂಪಾಗಿಸುವುದಕ್ಕೆ ನೀರನ್ನು ಹಾಯಿಸಲು ಕೊಳವೆಯ ಸಿಂಬೆಯನ್ನುಳ್ಳ ಪುನರಾವರ್ತ ಪ್ರವಾಹ ಪದ್ಧತಿಯ ಪಾತ್ರೆಯಲ್ಲಿ 1 ರಿಂದ 8 ಗಂಟೆಗಳ ವರೆಗೆ 65ಔ-170ಔ ಸೆ. ಉಷ್ಣತೆಯಲ್ಲಿ ಹೈಡ್ರೊಕ್ಲೋರಿಕ್ ಆಮ್ಲದ ಜೊತೆಗೆ ನಿಯತ ಪ್ರಮಾಣದಲ್ಲಿ ಜಲವಿಶ್ಲೇಷಣೆ ಮಾಡುವುದರಿಂದ ಹಿಟ್ಟನ್ನು ಅಲ್ಪಗಾತ್ರದ ಅಣುಗಳನ್ನಾಗಿ ವಿಚ್ಛೇದಿಸಿ ಡೆಕ್ಸ್‍ಟ್ರಿನ್‍ನ್ನು ತಯಾರಿಸುತ್ತಾರೆ.

	ಬಿಳಿಯ ಅಥವಾ ತಿಳಿಹಳದಿ ಬಣ್ಣದ ಪುಡಿ ಅಥವಾ ಕಣಕಣವಾಗಿರುವ ಡೆಕ್ಸ್‍ಟ್ರಿನ್ ನೀರಿನಲ್ಲಿ ಸುಲಭವಾಗಿ ವಿಲೀನವಾಗುವುದು. ಆದರೆ ಮದ್ಯಸಾರ ಅಥವಾ ಈಥರಿನಲ್ಲಿ ವಿಲೀನವಾಗುವುದಿಲ್ಲ. ಎರಿಥ್ರೊಡೆಕ್ಸ್‍ಟ್ರಿನ್ ಅಯೊಡೀನಿನೊಡನೆ ಕೆಂಪು ಬಣ್ಣಕ್ಕೆ ತಿರುಗಿದರೆ ಆ್ಯಕ್ರೊಡೆಕ್ಸ್‍ಟ್ರಿನ್ ಯಾವ ಬಣ್ಣವನ್ನೂ ತೋರಿಸುವುದಿಲ್ಲ. ಡೆಕ್ಸ್‍ಟ್ರಿನ್ನನ್ನು ಮರದಂಟಿಗೆ ಬದಲಾಗಿ ಗೋಂದು, ಸರಿ ಕಾಗದ ಮತ್ತು ನೂಲಿಗೆ ಬಟ್ಟೆಗೆ ಹೊಳಪು ನೀಡಲು ಗಂಜಿಯಾಗಿ ಬಳಸುವುದುಂಟು. ಆಹಾರವಾಗಿಯೂ ಇದರ ಉಪಯೋಗವಿದೆ. 
(ಜಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ